ಜನ್ಮಾಷ್ಟಮಿಗೆ ಸಾರ್ವಜನಿಕರಿಗೆ ಅವಕಾಶವಿಲ್ಲ

10/09/2020

ಉಡುಪಿ ಸೆ.10 : ಜಿಲ್ಲೆಯಲ್ಲಿ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಕೃಷ್ಣನ ಜನ್ಮಾಷ್ಟಮಿ ನಂತರದ ಶುಕ್ರವಾರ ರಥಬೀದಿಯಲ್ಲಿ ವಿಟ್ಲ ಪಿಂಡಿ ಮಹೋತ್ಸವ ನಡೆಯಲಿದೆ. ಆದರೆ ಎರಡೂ ದಿನದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಅವಕಾಶ ಇಲ್ಲ. ಸೆ.21 ರವರೆಗೆ ನೂರು ಜನ ಸೇರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ. ಹೀಗಾಗಿ ಉಡುಪಿ ಕೃಷ್ಣಮಠ ಕೋವಿಡ್ 19 ನ ಹಿಂದಿನ ಸೂಚನೆಯನ್ನೇ ಪಾಲಿಸಬೇಕಾಗುತ್ತದೆ. ರಥಬೀದಿಯಲ್ಲಿ ಸಾವಿರಾರು ಜನ ಸೇರಿ ಆಚರಿಸುವ ವಿಟ್ಲಪಿಂಡಿ ಆಚರಣೆಗೆ ಕೂಡ ನೂರು ಜನ ಸೇರುವ ಅವಕಾಶವೂ ಇಲ್ಲ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ವೇಷ, ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವಕಾಶ ಇಲ್ಲ. ಪೊಲೀಸ್ ನಿಯೋಜನೆ ಮಾಡಿ ಸಾರ್ವಜನಿಕ ಪಾಲ್ಗೊಳ್ಳುವಿಕೆಗೆ ಅವಕಾಶ ಕೊಡುವುದಿಲ್ಲ ಎಂದು ಡಿಸಿ ಹೇಳಿದ್ದಾರೆ.