ಕೊಡಗಿನಲ್ಲಿ ತೀವ್ರಗೊಂಡ ಮಳೆ : ರೆಡ್ ಅಲರ್ಟ್ ಘೋಷಣೆ

19/09/2020

ಮಡಿಕೇರಿ ಸೆ.19 : ಆಗಸ್ಟ್ ತಿಂಗಳ ಅತಿವೃಷ್ಟಿಯಿಂದ ಚೇತರಿಸಿಕೊಳ್ಳುವ ಹಂತದಲ್ಲೇ ಮತ್ತೆ ಕೊಡಗಿನಲ್ಲಿ ಮಳೆ ಬಿರುಸು ಪಡೆದುಕೊಂಡಿದೆ. ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ನದಿ, ತೊರೆಗಳು ತುಂಬಿ ಹರಿಯಲು ಆರಂಭಿಸಿವೆ. ಮಡಿಕೇರಿ ತಾಲ್ಲೂಕಿನ ನಾಪೋಕ್ಲು, ಸಂಪಾಜೆ, ಭಾಗಮಂಡಲ, ತಲಕಾವೇರಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಕಾವೇರಿ ನದಿ ಸೇರಿದಂತೆ ಇತರ ಉಪ ನದಿಗಳಲ್ಲೂ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ದಕ್ಷಿಣ ಕೊಡಗಿನಲ್ಲೂ ಬೆಳಗ್ಗೆಯಿಂದಲೇ ಮಳೆಯಾಗುತ್ತಿದ್ದು, ಸೋಮವಾರಪೇಟೆ ತಾಲ್ಲೂಕಿನಲ್ಲೂ ಮಳೆ ತೀವ್ರತೆಯನ್ನು ಪಡೆದುಕೊಂಡಿದೆ.
ಜಿಲ್ಲೆಯಲ್ಲಿ ಸೆ.21 ರ ಬೆಳಗ್ಗೆ 8.30 ಗಂಟೆಯವರೆಗೆ ಆರೆಂಜ್ ಅಲರ್ಟ್ ಮತ್ತು ಸೆ.21 ರ ಬೆಳಗ್ಗೆಯಿಂದ ಸೆ.22 ರ ಬೆಳಗ್ಗೆ ವರೆಗೆ ರೆಡ್ ಅಲರ್ಟ್‍ನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಮನವಿ ಮಾಡಿದೆ.
ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ 24*7 ಕಂಟ್ರೋಲ್ ರೂ.08272-221077, ವಾಟ್ಸ್‍ಆಪ್ ನಂ.8550001077 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.