ಆನೆ-ಮಾನವ ಸಂಘರ್ಷ : ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ರೈಲ್ ಬ್ಯಾರಿಕೇಡಿಂಗ್ ಅಳವಡಿಕೆ

ಮಡಿಕೇರಿ ಸೆ. 24 : ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ಸಾಮಾನ್ಯ ಸಮಸ್ಯೆಯಾಗಿದ್ದು, ಇದರಿಂದ ಮಾನವ ಪ್ರಾಣ ಹಾನಿ ಮತ್ತು ಬೆಳೆ ಹಾನಿಯಾಗುತ್ತಿದೆ. ಈ ರೀತಿಯ ಸಂಘರ್ಷವನ್ನು ತಪ್ಪಿಸುವ ಸಲುವಾಗಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ರೈಲ್ವೆ ಸಚಿವಾಲಯದ ಸಹಯೋಗದೊಂದಿಗೆ ರೈಲ್ವೆ ಇಲಾಖೆಯಲ್ಲಿನ ನಿರುಪಯುಕ್ತ ರದ್ದಿ ಹಳಿಗಳನ್ನು ಬಳಸಿಕೊಂಡು ರೈಲ್ ಬ್ಯಾರಿಕೇಡಿಂಗ್ ಎಂಬ ಹೊಸ ತಂತ್ರಜ್ಞಾನ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಕುಶಾಲನಗರ ಹೋಬಳಿಯ ವಾಲ್ನೂರು ತ್ಯಾಗತ್ತೂರು ಗ್ರಾಮದ 9 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ ಬ್ಯಾರಿಕೇಡಿಂಗ್ ನ್ನು ಅಳವಡಿಸಲಾಗಿದ್ದು, ಇದರಿಂದ ಆನೆ ಹಾವಳಿ ನಿಯಂತ್ರಣಗೊಂಡಿರುತ್ತದೆ. ಈ ಭಾಗದಲ್ಲಿ ಭೂಮಿಯನ್ನು ಪಾಳು ಬಿಟ್ಟಿದ್ದ ರೈತರು, ಅನೇಕ ವರ್ಷಗಳ ನಂತರ ಈ ವರ್ಷ ಭತ್ತ ನಾಟಿಯನ್ನು ಮಾಡಿರುತ್ತಾರೆ.
ಈ ದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೊಡಗು ಜಿಲ್ಲಾ ಪಂಚಾಯತ್ ಮತ್ತು ಉಪವಿಭಾಗಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಯಿತು.


