ಅನಾಥ ಗೋವುಗಳಿಗಾಗಿ 1 ರೂ. ನೀಡಿ : ಶ್ರೀಕೃಷ್ಣ ಗೋಶಾಲೆ ಮನವಿ

14/10/2020

ಮಡಿಕೇರಿ ಅ.14 : ಪ್ರಾಕೃತಿಕ ವಿಕೋಪದಿಂದ ಬೀದಿಗೆ ಬಿದ್ದಿರುವ ಅನಾಥ ಗೋವುಗಳ ರಕ್ಷಣೆ ಮತ್ತು ನಿರ್ವಹಣೆಗಾಗಿ ತಲಾ 1 ರೂಪಾಯಿಯನ್ನು ನೀಡುವ ಮೂಲಕ ಸಾರ್ವಜನಿಕರು ಶ್ರೀಕೃಷ್ಣ ಗೋಶಾಲೆಗೆ ಸಹಕಾರ ನೀಡುವಂತೆ ಗೋಶಾಲೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅನಾಥ ಹಸುಗಳಿಗೆ ಆಶ್ರಯ ಮತ್ತು ಆಹಾರ ನೀಡುವ ಉದ್ದೇಶದಿಂದ ಭಾಗಮಂಡಲದ ಚೆಟ್ಟಿಮಾನಿ ಗ್ರಾಮದಲ್ಲಿ ಒಂಭತ್ತು ತಿಂಗಳ ಹಿಂದೆ ಆರಂಭಿಸಲಾದ ಶ್ರೀಕೃಷ್ಣ ಗೋಶಾಲೆಯು ಪ್ರಸ್ತುತ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದ್ದು, ಸಾರ್ವಜನಿಕರು ಕನಿಷ್ಠ 1 ರೂಪಾಯಿ ನೆರವು ನೀಡುವ ಮೂಲಕ ಮೂಖ ಪ್ರಾಣಿಗಳನ್ನು ರಕ್ಷಿಸುವಂತೆ ಕೋರಿದರು.
ಗೋಶಾಲೆಯ ಅಭಿವೃದ್ಧಿಗಾಗಿ ಸಹಕಾರ ನೀಡುವುದಾಗಿ ಹೊರ ಜಿಲ್ಲೆ ಮತ್ತು ರಾಜ್ಯದ ವಿವಿಧ ಸಂಘ, ಸಂಸ್ಥೆಗಳು ಹಾಗೂ ದಾನಿಗಳು ಭರವಸೆ ನೀಡಿದ್ದರು. ಆದರೆ ದೇಶವನ್ನು ವ್ಯಾಪಿಸಿದ ಕೋವಿಡ್‍ನಿಂದಾಗಿ ಯಾರಿಂದಲೂ ನೆರವು ಸಿಗಲಿಲ್ಲ, ರಾಜ್ಯದ ವಿವಿಧೆಡೆಯ ಮತ್ತು ಜಿಲ್ಲೆಯ ಕೆಲವರು ತಮ್ಮಿಂದಾದಷ್ಟು ಆರ್ಥಿಕ ನೆರವು ನೀಡಿದ್ದಾರೆ. ಜನನಿ ಗ್ರೂಪ್ ಕೂಡ ಸಹಾಯ ಹಸ್ತವನ್ನು ಚಾಚಿದೆ ಎಂದು ಹರೀಶ್ ಜಿ.ಆಚಾರ್ಯ ಮಾಹಿತಿ ನೀಡಿದರು.
ಗೋಶಾಲೆಯಲ್ಲಿ ಪ್ರಸ್ತುತ 70 ಗೋವುಗಳು ಅಶ್ರಯ ಪಡೆದಿವೆ. ಕೆಲವು ಪೊಲೀಸ್ ಠಾಣೆ ಮೂಲಕ ವಶ ಪಡಿಸಿಕೊಂಡಿರುವ ಗೋವುಗಳು, ಸ್ಥಳೀಯರು ಮತ್ತು ಸುಳ್ಯ ಭಾಗದಿಂದ ತಂದು ಬಿಟ್ಟಿರುವ ಗೋವುಗಳು ಕೂಡ ಆಶ್ರಯ ಪಡೆದಿವೆÉ.
ಇದೀಗ ಮಳೆಯು ಅತಿಯಾಗಿರುವುದರಿಂದ ಗೋವುಗಳನ್ನು ಕಟ್ಟಿ ಹಾಕಿಯೇ ಸಾಕಬೇಕಾಗಿದೆ. ಒಣ ಹುಲ್ಲು, ಹಸಿ ಹುಲ್ಲು, ಹಿಂಡಿ, ಕೆಲಸಗಾರರ ಸಂಬಳ, ಔಷಧಿ ಸೇರಿದಂತೆ ಇತ್ಯಾದಿಗಳ ಖರ್ಚು ವೆಚ್ಚಗಳು ಅಧಿಕಗೊಂಡು ಮಾಸಿಕ 2.50 ಲಕ್ಷ ರೂ. ನಿರ್ವಹಣೆಗಾಗಿ ಅಗತ್ಯವಿದೆ. ಪಶುಸಂಗೋಪನೆ ಇಲಾಖೆಯಿಂದ 45,600 ರೂ.ಗಳನ್ನು ನೀಡಿದ್ದಾರೆ. ಇಲ್ಲಿಯವರೆಗೆ ಸಾರ್ವಜನಿಕ ವಂತಿಗೆ ರೂಪದಲ್ಲಿ 2.87 ಲಕ್ಷ ರೂ.ಸಂಗ್ರಹವಾಗಿದ್ದು, ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಬಂದಿಲ್ಲವೆಂದು ಅವರು ತಿಳಿಸಿದರು.
ಶ್ರೀಕೃಷ್ಣ ಗೋಶಾಲೆಯ ಅಭಿವೃದ್ಧಿಗಾಗಿ ಮತ್ತು ಗೋವುಗಳ ಆಹಾರಕ್ಕಾಗಿ ಸಾರ್ವಜನಿಕರು ದಿನವೊಂದಕ್ಕೆ ತಲಾ 1 ರೂಪಾಯಿಯಂತೆ ದೇಣಿಗೆ ನೀಡಿದರೆ ಪ್ರತಿ ತಿಂಗಳು ಗೋಶಾಲೆಯ ಪ್ರತಿನಿಧಿಗಳು ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರದೊಂದಿಗೆ ಬಂದು ಹಣ ಪಡೆಯಲಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿಯೂ ಆಶ್ರಯವಿಲ್ಲದ ಬೀಡಾಡಿ ಗೋವುಗಳನ್ನು ಕರೆದುಕೊಂಡು ಹೋಗಿ ಗೋಶಾಲೆಯಲ್ಲಿ ಪೋಷಿಸುವ ಕಾರ್ಯ ನಡೆಯಲಿದೆ. ಗೋವುಗಳಿಗೆ ಜಾತಿಯ ಆಧಾರವಿಲ್ಲ, ಎಲ್ಲರೂ ಸೇರಿ ಗೋವುಗಳ ಪಾಲನೆ, ಪೋಷಣೆ ಮಾಡಬೇಕಾಗಿದೆ ಮತ್ತು ಮಲೆನಾಡ ತಳಿಗಳನ್ನು ಉಳಿಸಬೇಕಾಗಿದೆ ಎಂದು ಹರೀಶ್ ಜಿ.ಆಚಾರ್ಯ ತಿಳಿಸಿದರು.
ಪಶುಪಾಲನಾ ಇಲಾಖೆಯಿಂದ ಗೋಶಾಲೆಗೆ ಅಗತ್ಯ ಸಹಕಾರ ದೊರೆಯುತ್ತಿದೆ. ಆದರೆ ವೈದ್ಯರ ಕೊರತೆ ಇಲಾಖೆಯನ್ನು ಕಾಡುತ್ತಿದ್ದು, ಈ ಬಗ್ಗೆ ಸರ್ಕಾರ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ದೇಣಿಗೆ ನೀಡುವವರು ಈ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡುವಂತೆ ಮನವಿ ಮಾಡಿದರು.

ಮೊ.ಸಂ 9480180456
ಬ್ಯಾಂಕ್ ಖಾತೆ ಸಂಖ್ಯೆ :
ಎಸ್.ವಿ.ಕೆ.ಎಸ್.ಜೆ.ಎಸ್ ಟ್ರಸ್ಟ್ (ರಿ)
89731 0210000001
ಐಎಫ್‍ಎಸ್‍ಸಿ ಕೋಡ್ : BKID0008973
ಬ್ಯಾಂಕ್ ಆಫ್ ಇಂಡಿಯಾ, ಮಡಿಕೇರಿ ಶಾಖೆ.
ಸುದ್ದಿಗೋಷ್ಠಿಯಲ್ಲಿ ಗೋಶಾಲೆಯ ಮಹಾಪೋಷಕ ಪಳಂಗಂಡ ಈಶ್ವರ್, ಪೋಷಕರಾದ ಗಣೇಶ್ ರೈ ಹಾಗೂ ಓಂ ಪ್ರಕಾಶ್ ಉಪಸ್ಥಿತರಿದ್ದರು.