ಸಿಬಿಸಿಎಸ್ ಪದ್ಧತಿ ಉದ್ಯೋಗಕ್ಕೆ ಮಾರಕ

17/10/2020

ಬೆಂಗಳೂರು ಅ.17 : ಸಿಬಿಸಿಎಸ್ ಪದ್ಧತಿಯಿಂದಾಗಿ ಕನ್ನಡ ಭಾಷಾ ಬೋಧನೆಯ ಕಾರ್ಯಭಾರ ಕಡಿಮೆಯಾಗಿರುವ ಪರಿಣಾಮ ಕನ್ನಡ ಪ್ರಾಧ್ಯಾಪಕರ ಉದ್ಯೋಗಕ್ಕೆ ಮಾರಕವಾಗಿದ್ದು, ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಅವರಲ್ಲಿ ಮನವಿ ಮಾಡಿದ್ದಾರೆ.
ಯುಜಿಸಿ ಜಾರಿಗೆ ತರಲಾಗಿರುವ ಸಿಬಿಸಿಎಸ್ ಪದ್ಧತಿಯ ಅನುಷ್ಠಾನದಲ್ಲಾದ ಗೊಂದಲಗಳ ಬಗ್ಗೆ ಈಗಾಗಲೇ 2-3 ಬಾರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಂಬಂಧಪಟ್ಟ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆಯಲಾಗಿದೆ. ಆದಾಗ್ಯೂ,ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಸಿಬಿಸಿಎಸ್ ಪದ್ಧತಿಯ ಮಾರ್ಗಸೂಚಿ ಮಾದರಿಗಳನ್ನೇ ಕಾನೂನು ಎಂಬ ರೀತಿಯಲ್ಲಿ ಭಾವಿಸಿಕೊಂಡು ಇಂಗ್ಲಿಷ್ ಭಾಷೆಯನ್ನು ಕಡ್ಡಾಯಗೊಳಿಸಿ ಕನ್ನಡ ಭಾಷಾ ವಿಷಯದ ಬೋಧನಾ ಕಾರ್ಯಭಾರವನ್ನು ಕಡಿತಗೊಳಿಸಿರುವುದರಿಂದ ಕನ್ನಡ ಪ್ರಾಧ್ಯಾಪಕರು ತೊಂದರೆಗೆ ಸಿಲುಕುವಂತಾಗಿದೆ ಎಂದು ಉಪಮುಖ್ಯಮಂತ್ರಿಗಳಿಗೆ ಬರೆಯಲಾಗಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.